ಕಾಣದ ‘ಹೊರೆ’

ಸಂಜೆ ಹಿಂದಿರುಗಿದ ಧೀರಾನಂದ ಮತ್ತು ವೃಜಾನಂದರು ಅಂದಿನ ಭಿಕ್ಷೆಯನ್ನು ಗುರುವಿನ ಮುಂದೆ ಇಟ್ಟರು.
“ಈಗ ಹೋಗಿ ವಿಶ್ರಾಂತಿ ತೆಗೆದುಕೊಂಡು ಧ್ಯಾನಾಸಕ್ತರಾಗಿ” ಎಂದು ಗುರು ಅನುಜ್ಞೆ ಮಾಡಿದ. ನಂತರ ಏನೋ ಹೊಳೆದವನಂತೆ, “ಎಲ್ಲವೂ ಸುಗಮವಾಗಿತ್ತೇ?” ಎಂದು ಕೇಳಿ ಕಣ್ಮುಚ್ಚಿ ಕುಳಿತ.
“ಎಲ್ಲವೂ ಚೆನ್ನಾಗಿತ್ತು ಗುರುವೇ” ಎಂದು ಹೇಳಿದ ಧೀರಾನಂದ ಅಲ್ಲಿಂದ ಹೊರಟ.
ಆದರೆ ವೃಜಾನಂದ ಅಲ್ಲಿಯೇ ನಿಂತವನು, “ಗುರುವರ್ಯಾ!” ಎಂದ ಮೆಲ್ಲನೆ. “ಇಂದು ನದೀತೀರದಲ್ಲಿ ಒಬ್ಬ ಮಹಿಳೆ ಅಳುತ್ತಿದ್ದುದನ್ನು ಕಂಡೆವು. ಅವಳು ನದಿ ದಾಟಿ ಆರೋಗ್ಯ ಸರಿಯಿರದ ಅವಳ ತಾಯಿಯ ಬಳಿಗೆ ಹೋಗಬೇಕೆಂದುಕೊಂಡಳು. ಈ ಧೀರಾನಂದ ಏನು ಮಾಡಿದ ಗೊತ್ತೇ? ಅವಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನದಿಯಲ್ಲಿ ನಡೆದ. ಕುತ್ತಿಗೆಯವರೆಗೂ ನೀರು ಇದ್ದರೂ ಒಂದಿಷ್ಟೂ ವಿಚಲಿತನಾಗದೇ ಆ ಕಡೆಯ ದಡಕ್ಕೆ ಅವಳನ್ನು ತಲುಪಿಸಿದ!” ಎಂದ.
ವೃಜಾನಂದನ ದುಃಖದ ಅರಿವು ಗುರುವಿಗಾಗತೊಡಗಿತ್ತು. “ನಾನು ಅವನನ್ನು ಎಚ್ಚರಿಸಿದೆ ಗುರುವರ್ಯಾ. ಯುವತಿಯರನ್ನು ನಾವು ಮುಟ್ಟಕೂಡದು ಎಂದು ನೀವು ಹೇಳಿದ್ದು ಅವನಿಗೆ ಹೇಳಿದರೂ ಅವನು ಅದನ್ನು ಕೇಳಿಸಿಕೊಳ್ಳಲು ಸಿದ್ಧನಿರಲಿಲ್ಲ” ಎಂದ ವೃಜಾನಂದ ಮತ್ತೆ.
ಗುರು ಕಣ್ತೆರೆಯಲಿಲ್ಲ. ವೃಜಾನಂದ ನಿರಾಸೆಯೊಂದಿಗೆ ಅಲ್ಲಿಂದ ಹೊರಟ. ಸಂಜೆಯ ವೇಳೆ ಧ್ಯಾನಕ್ಕೆ ಮೊದಲು ಗುರುವು ಎಲ್ಲರೊಂದಿಗೆ ಕೆಲ ನಿಮಿಷ ಮಾತಾಡುವ ಪರಿಪಾಠವಿಟ್ಟುಕೊಂಡಿದ್ದ. ಸಾಮಾನ್ಯವಾಗಿ ಅದು ಅಂದಿನ ಯಾವುದಾದರೂ ಘಟನೆಯ ಬಗ್ಗೆ ಇರುತ್ತಿತ್ತು. ಇಂದು ಧೀರಾನಂದನ ವಿಷಯವು ಹೊರಬರುವುದೆಂದು ವೃಜಾನಂದ ನಿರೀಕ್ಷಿಸಿದ. ಆದರೆ ಗುರು ಅದರ ಬಗ್ಗೆ ಮಾತಾಡದಿದ್ದುದು ವೃಜಾನಂದನನ್ನು ಚಕಿತಗೊಳಿಸಿತ್ತು. ಗುರು ತನ್ನ ಕುಟೀರಕ್ಕೆ ಹಿಂದಿರುಗಿದಾಗ ವೃಜಾನಂದ ಅವನನ್ನು ಹಿಂಬಾಲಿಸಿದ. ಹೇಗೆ ಮತ್ತೆ ವಿಷಯ ಆರಂಭಿಸಬೇಕೆಂದು ತಿಳಿಯದೇ ಕೊನೆಗೆ, “ಗುರವರ್ಯಾ, ನೀವು ಧೀರಾನಂದನನ್ನು ತರಾಟೆಗೆ ತೆಗೆದುಕೊಳ್ಳಬೇಕು. ಅವನ ಒಳ್ಳೆಯದಕ್ಕೇ ನೀವದನ್ನು ಮಾಡಬೇಕು. ಆ ಯುವತಿ ಬಹಳ ಸುಂದರಿಯಾಗಿಯೂ ಇದ್ದಳು” ಎಂದ.
“ದೀಪಕ್ಕೆ ಎಣ್ಣೆ ಹಾಕು ವೃಜಾನಂದ” ಎಂದಷ್ಟೇ ಹೇಳಿದ ಗುರು ಕಣ್ಮುಚ್ಚಿ ಕುಳಿತ. ತನ್ನ ಗೆಳೆಯನ ಬಗ್ಗೆ ಒಂದು ಮಾತೂ ಆಡದಿದ್ದುದು ವೃಜಾನಂದನನ್ನು ಅಚ್ಚರಿಗೊಳಿಸಿತ್ತು.
ಮರುದಿನ ನದಿಗೆ ಸ್ನಾನಕ್ಕೆ ಹೊರಟ ಗುರುವನ್ನು ಬೆಂಬತ್ತಿ ಬಂದ ವೃಜಾನಂದ ಮತ್ತೆ, “ಅವಳು ಯುವತಿ, ಸುಂದರಿ ಹಾಗೂ ಒಳ್ಳೆಯ ಅಂಗಸೌಷ್ಠವವುಳ್ಳವಳಾಗಿದ್ದಳು. ಧೀರಾನಂದ ಅವಳ ಕಾಲುಗಳನ್ನು ಹಿಡಿದು ಎತ್ತಿದ್ದನ್ನು ನೋಡಿ ನಾನು…” ಎಂದ.
ಗುರು ಮಾತಾಡದೇ ನದಿಗಿಳಿದ. ವೃಜಾನಂದನ ಮಾತುಗಳನ್ನು ಕೇಳಿಸಿಕೊಂಡಂತಿರಲಿಲ್ಲ. ಮರುದಿನವೆಲ್ಲಾ ವೃಜಾನಂದನಿಗೆ ತನ್ನ ಗೆಳೆಯ ಧೀರಾನಂದನ ಕೃತ್ಯದ ವಿವರ ಕೊಡಲು ಸಾಧ್ಯವಾಗಲಿಲ್ಲ. ಧೀರಾನಂದನಂತೂ ತಾನು ಯಾವ ಪಾಪವನ್ನೂ ಎಸಗದವನಂತೆ ಸಾಧಾರಣವಾಗಿಯೇ ಇದ್ದ. ಅವನನ್ನು ಗುರು ಬೈಯದಿದ್ದುದು ವೃಜಾನಂದನಿಗೆ ಬಹಳ ಆಶ್ಚರ್ಯವಾಗಿತ್ತು.
ಸಂಜೆಯ ಧ್ಯಾನದಲ್ಲಿಯೂ ಅವನು ಚಿತ್ತೈಕಾಗ್ರತೆ ತೋರಲಾಗಲಿಲ್ಲ. ಆಗ ಗುರುವು, “ವೃಜಾನಂದ, ನಿನ್ನ ಹೆಗಲ

ಮೇಲಿನ ಹೊರೆಯನ್ನು ಇಳಿಸುವೆಯಾ?” ಎಂದು ಮೃದುವಾಗಿ ಹೇಳಿದ.
“ಹೊರೆ…? ಗುರುವರ್ಯಾ… ನಾನು ನನ್ನ ಹೆಗಲ ಮೇಲೆ ಯಾವುದೇ ಹೊರೆಯನ್ನೂ ಹೊತ್ತುಕೊಂಡಿಲ್ಲ!” ಎಂದು ಚಕಿತತೆಯಿಂದ ತಡವರಿಸಿದ ವೃಜಾನಂದ.
“ನೀನು ಹೊತ್ತಿದ್ದೀ ವೃಜಾನಂದ. ನಾನು ಅವಳನ್ನು ನಿನ್ನ ಮೇಲೆ ನೋಡುತ್ತಿದ್ದೇನೆ. ಧೀರಾನಂದ ಕೆಳಗಿಳಿಸಿದೊಡನೆ ಅವಳು ಅವನಿಂದ ಇಳಿದಳು. ಆದರೆ ಆ ಕ್ಷಣದಿಂದ ಅವಳು ನಿನ್ನ ಭುಜಗಳ ಮೇಲೆ ಸವಾರಿ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲ, ದಿನದಿನಕ್ಕೆ ಅವಳು ಬೆಳೆಯುತ್ತಿದ್ದಾಳೆ. ಒಂದು ದಿನ ನೀನು ಜಜ್ಜಿಹೋಗುವೆ” ಎಂದ ಗುರು.
ವೃಜಾನಂದ ಬೆಚ್ಚಿದವನು ನಂತರ ತಲೆ ತಗ್ಗಿಸಿದ.
“ಶಿಷ್ಯರೇ, ನಾವು ಬೇರೆಯವರಲ್ಲಿ ತಪ್ಪು ಕಂಡುಹಿಡಿಯುವುದು ನಮ್ಮ ಬಲಹೀನತೆ. ಧೀರಾನಂದ ಆ ಯುವತಿಗೆ ಆ ಕ್ಷಣದಲ್ಲಿ ಸಹಾಯ ಮಾಡಿ ಸುಮ್ಮನಾದ. ಇದನ್ನು ನಾವು ಹೊರಕೂಡದು. ಇತರರ ನಿಜವಾದ ಪಾಪಗಳನ್ನು ಕೂಡಾ ಟೀಕಿಸುವ ನಾವು ‘ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಎಂಬುದನ್ನು ನೆನಪಿಟ್ಟುಕೊಳ್ಳಬೇಕು” ಎಂದ ಗುರು.

– Yathiraj Veerambudhi

Recommended For You

About the Author: Sriram

Leave a Reply

Your email address will not be published. Required fields are marked *