ಗರುಡನ ಸಹಾನುಭೂತಿ

ಕೈಲಾಸದಲ್ಲಿದ್ದ ಶಿವನನ್ನು ನೋಡಲು ಒಮ್ಮೆ ವಿಷ್ಣುದೇವರು ಹೋದರು. ಬಾಗಿಲಲ್ಲಿಯೇ ತನ್ನ ವಾಹನವಾದ ಗರುಡನನ್ನು ಇರಲು ಬಿಟ್ಟರು.
ಗರುಡ ತನ್ನ ಸುತ್ತಮುತ್ತಲಿದ್ದ ಸೌಂದರ್ಯವನ್ನು ಸವಿಯಹತ್ತಿದ್ದ. ಮುಳುಗುತ್ತಿದ್ದ ಸೂರ್ಯನ ಕಿರಣಗಳ ಸಪ್ತವರ್ಣದ ಬೆಳಕು ಹಿಮಾವೃತ ಶಿಖರಗಳ ಮೇಲೆ ಚಿತ್ತಾರ ಮೂಡಿಸುತ್ತಿತ್ತು.
ಅಲ್ಲಿದ್ದ ಒಂದು ಪುಟ್ಟ ಹಕ್ಕಿಯು ಆಗ ಗರುಡನ ಕಣ್ಣಿಗೆ ಬಿತ್ತು. ‘ಎಂತಹ ಸೃಷ್ಟಿ ಭಗವಂತನದು! ಅಗಾಧವಾದ ಹಿಮಾಲಯವನ್ನು ಸೃಷ್ಟಿಸಿದವನೇ ಈ ಪುಟ್ಟ ಹಕ್ಕಿಯನ್ನೂ ಸೃಷ್ಟಿಸಿದ್ದಾನೆ! ಎರಡೂ ಅದ್ಭುತಗಳೇ’ ಎಂದುಕೊಂಡ.
ಆಗ ಅಲ್ಲಿಗೆ ಶಿವನ ದರ್ಶನಕ್ಕಾಗಿ ಬಂದ ಯಮನ ಕಣ್ಣಿಗೂ ಆ ಹಕ್ಕಿ ಬಿದ್ದಿತು. ಒಮ್ಮೆ ಅದನ್ನು ನೋಡಿ ಹುಬ್ಬೇರಿಸಿ ಒಳಗೆ ಹೊರಟುಹೋದ.
ಗರುಡನ ಮನದಲ್ಲಿ ಸಾವಿರ ಆಲೋಚನೆಗಳು. ‘ಯಮ ನೋಡಿದನೆಂದರೆ ಆ ಹಕ್ಕಿಯ ಕತೆ ಮುಗಿದಂತೆಯೇ. ವಾಪಸ್ಸು ಬರುವಾಗ ಅದರ ಆತ್ಮವನ್ನು ಒಯ್ಯುತ್ತಾನೆ’ ಎಂದುಕೊಂಡ.
ಗರುಡನ ಮನದಲ್ಲಿ ಆ ಹಕ್ಕಿಯ ಬಗ್ಗೆ ಅನುಕಂಪದ ಮಳೆಯೇ ಸುರಿಯಿತು. ಅಯ್ಯೋ ಈ ಹಕ್ಕಿಯನ್ನು ಹೇಗಾದರೂ ಸಾಯುವುದರಿಂದ ರಕ್ಷಿಸಬೇಕು ಎಂದುಕೊಂಡ. ನಂತರ ‘ನಿಯತಿಯ ನಿಯಮವನ್ನು ಯಾರೂ ಬದಲಾಯಿಸಲಾಗದು. ನಾನು ಇದರಲ್ಲಿ ತಲೆ ತೂರಿಸಬಾರದು. ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದುಕೊಂಡ.
ಒಂದು ನಿಮಿಷ ಕಳೆಯಿತು. ಆದರೆ ಅವನ ಭಾವೋದ್ವೇಗಗಳು ಕಡಿಮೆಯಾಗಿರಲಿಲ್ಲ. ಅವನಿಗೆ ಸಾಂತ್ವನ ಸಿಕ್ಕಿರಲಿಲ್ಲ. ‘ನನಗೇನಾದರೂ ಆ ಹಕ್ಕಿಯನ್ನು ಉಳಿಸಲು ಸಾಧ್ಯವಾಗುವುದಾದರೆ ಏಕೆ ಅದನ್ನು ಮಾಡಬಾರದು?’ ಎಂದುಕೊಂಡ. ಹೇಗೆ ಉಳಿಸುವುದೆಂದು ಯೋಚಿಸತೊಡಗಿದ.
ಅವನಲ್ಲಿನ ಮತ್ತೊಂದು ಧ್ವನಿಯು, ‘ಇದು ನನ್ನ ಅಹಂ ಮಾತಾಡುತ್ತಿರುವುದು. ನಾನ್ಯಾರು ಯಾರನ್ನಾದರೂ ಉಳಿಸಲು?’ ಎಂದಿತು.
ಮತ್ತೊಂದು ಧ್ವನಿ ಅವನ ಹೃದಯದಾಳದಿಂದ ಹೊರಹೊಮ್ಮಿ, ‘ನನ್ನ ಬುದ್ಧಿವಂತಿಕೆ ಯಾವುದರಲ್ಲಿದೆ? ಏನಾದರೂ ಮಾಡುವುದರಲ್ಲಿಯೋ, ಸುಮ್ಮನಿರುವುದರಲ್ಲಿಯೋ? ನಾನು ಈ ಅನಿರ್ಧಾರಿತ ಪರಿಸ್ಥಿತಿಯಲ್ಲಿ ಏನೇ ಮಾಡಿದರೂ ಅದು ವಿಧಿಯೆಂದುಕೊಳ್ಳಲೇ? ಓ ದೇವಾ, ನನ್ನ ಕ್ರಿಯೆಯೂ, ಭಾವನೆಗಳೂ ನಿನಗೇ ಅರ್ಪಿತ’ ಎಂದು ಹೇಳಿತು.
ಮರುಕ್ಷಣ ಅವನು ಆ ಹಕ್ಕಿಯನ್ನು ಎತ್ತಿಕೊಂಡು ಮಿಂಚಿನ ವೇಗದಲ್ಲಿ ಬಹುದೂರದ ದಂಡಕಾರಣ್ಯಕ್ಕೆ ಹೋದ. ಕೊಳವೊಂದರ ಪಕ್ಕದ ಬಂಡೆಯ ಮೇಲೆ ಅದನ್ನು ಬಿಟ್ಟ. ಮುಂದಿನ ಘಳಿಗೆಯಲ್ಲಿ ಅವನು ಕೈಲಾಸಕ್ಕೆ ಹಿಂದಿರುಗಿ ವಿಷ್ಣುದೇವರಿಗಾಗಿ ನಿರೀಕ್ಷಿಸತೊಡಗಿದ.
ಆದರೆ ಯಮ ಈಗಾಗಲೇ ಹೊರಗೆ ಬಂದಿದ್ದವನು ಗರುಡನನ್ನು ನೋಡಿ ಮುಗುಳ್ನಕ್ಕ. ಗರುಡ ಅವನಿಗೆ ನಮಸ್ಕರಿಸಿ, “ನಿನ್ನನ್ನೊಂದು ಪ್ರಶ್ನೆ ಕೇಳಲೇ? ಒಳಗೆ ಹೋಗುವ ಮೊದಲು ನೀನು ಒಂದು ಹಕ್ಕಿಯ ಕಡೆ ನೋಡಿದೆ. ಒಂದು ಕ್ಷಣ ನೀನು ಚಿಂತಾಕ್ರಾಂತನಾಗಿ ಕಂಡಿದ್ದೆ. ಏಕೆ?” ಎಂದ.
“ಓಹ್, ನಾನು ಅದನ್ನು ಮರೆತೇಬಿಟ್ಟಿದ್ದೆ. ನಾನು ಆ ಹಕ್ಕಿಯನ್ನು ನೋಡಿದಾಗ ನನಗೆ ಅದು ಇನ್ನು ಕೆಲವೇ ಕ್ಷಣಗಳಲ್ಲಿ ದೂರದ ದಂಡಕಾರಣ್ಯದಲ್ಲಿ ಕೊಳವೊಂದರ ಬಳಿಯಲ್ಲಿ ಒಂದು ಹೆಬ್ಬಾವಿನ ಬಾಯಿಗೆ ತುತ್ತಾಗುವುದೆಂದು ಅರಿವಾಯಿತು. ಆ ಪುಟ್ಟ ಹಕ್ಕಿ ಅಷ್ಟು ದೂರ ಬಲುಕಡಿಮೆ ಸಮಯದಲ್ಲಿ ಹೇಗೆ ಹೋಗಬಲ್ಲುದೆಂದು ಅಂದುಕೊಂಡೆ. ನಂತರ ಅದರ ಬಗ್ಗೆ ಮರೆತುಬಿಟ್ಟೆ. ಈಗ ಆ ಹಕ್ಕಿ ಇಲ್ಲಿ ಇಲ್ಲ ಅಂದರೆ ಅದು ಹೇಗೋ ಘಟಿಸಿರಬೇಕು. ಆ ಪುಟ್ಟ ಹಕ್ಕಿ ಬೇರೊಂದು ಜನ್ಮವನ್ನು ಪಡೆಯುವ ಸಮಯ ಬಂದಾಗಿದೆ” ಎಂದು ಮುಗುಳ್ನಕ್ಕು ಹೇಳಿ ಯಮ ಹೊರಟುಹೋದ.
ಅವನಿಗೆ ಈ ವಿಷಯದಲ್ಲಿ ಗರುಡನ ಪಾತ್ರದ ಬಗ್ಗೆ ತಿಳಿದಿತ್ತೇ? ಅದು ನಮಗೆ ತಿಳಿಯದು.
ಆದರೆ ಗರುಡ ಆಘಾತದಿಂದ ಸ್ಥಾವರದಂತಾದ. ಅವನಿಗೆ ಸಂತಸ ಪಡಬೇಕೋ ದುಃಖಿಸಬೇಕೋ ಅರಿವಾಗಲಿಲ್ಲ. ಆದರೆ ಕೆಲವು ಕ್ಷಣಗಳ ಬಳಿಕ ಅವನು ಭಾವನಾತೀತವಾದ ಸ್ಥಿತಿ ತಲುಪಿ ‘ಓ ವಿಷ್ಣುದೇವರೇ! ನಾನು ಕೇವಲ ನಿನ್ನ ವಾಹನ. ನನ್ನ ಕ್ರಿಯೆಯಲ್ಲಿಯೂ ಜಡತೆಯಲ್ಲಿಯೂ ನಿನ್ನ ವಾಹನ ಮಾತ್ರ ಆಗಿರುತ್ತೇನೆ’ ಎಂದುಕೊಂಡ.
ಈಗ ಅವನು ಅವನ ಸಮಭಾವದ ಜ್ಞಾನೋದಯದ ಸ್ಥಿತಿಗೆ ಮರಳಿದ್ದ.

 

                                                                                                                          -Yathiraj Veerambudhi

Recommended For You

About the Author: Sriram

Leave a Reply

Your email address will not be published. Required fields are marked *